ಓಲೆ ಗ್ರಂಥಗಳು: ತಾಳೆಯ ಮರದ ಗರಿಗಳನ್ನು ಹದಗೊಳಿಸಿ, ಅವುಗಳಲ್ಲಿ ಅಕ್ಷರಗಳನ್ನು ಕೊರೆದು ಸಿದ್ಧಪಡಿಸಿದ ಪುಸ್ತಕಗಳು, ಕಾಗದ ದೊರೆಯದಿದ್ದ ಪ್ರಾಚೀನ ಯುಗದ ಜ್ಞಾನ ತಲೆಮಾರಿನಿಂದ ತಲೆಮಾರಿಗೆ ಉಳಿದು ಬಂದಿರುವುದು ಇಂಥ ಗ್ರಂಥಗಳಿಂದಲೇ (ನೋಡಿ- ಓಲೆಮರ).
ಓಲೆಗರಿಗಳನ್ನು ಬರೆವಣಿಗೆಗೆ ಉಪಯೋಗಿಸುತ್ತಿದ್ದುದನ್ನು ಪ್ಲಿನೀ (ಪ್ರ.ಶ.23-79) ಎಂಬ ಪ್ರಕೃತಿಶಾಸ್ತ್ರಜ್ಞ ಉಲ್ಲೇಖಿಸಿದ್ದಾನೆ. ಭಾರತ ದೇಶವನ್ನು ಸಂದರ್ಶಿಸಿದ ಹೂಯೆನ್ ತ್ಸಾಂಗ್ (ಪ್ರ.ಶ. 629-45) ಕೊಂಕಣಪುರದ ಉತ್ತರಕ್ಕೆ ತಾಳೆಮರಗಳ ಕಾಡಿರುವುದನ್ನೂ ಅವುಗಳ ಎಲೆಗಳನ್ನು ಜನ ಬರೆವಣಿಗೆಗಾಗಿ ಉಪಯೋಗಿಸುವುದನ್ನೂ ತಿಳಿಸಿದ್ದಾನೆ. ಸು.ಪ್ರ.ಶ. 1030ರಲ್ಲಿ ಭಾರತಕ್ಕೆ ಬಂದಿದ್ದ ಅಲ್ಬೆರೂನಿ ಎಂಬ ಪ್ರವಾಸಿ ತಾಳೆ ಮತ್ತು ಭೂರ್ಜಪತ್ರಗಳನ್ನು ನೋಡಿದ್ದುದಾಗಿ ತಿಳಿಸಿದ್ದಾನೆ. ಖರ್ಜೂರ ಉತ್ತುತ್ತೆ, ತೆಂಗಿನಮರಗಳನ್ನು ಹೋಲುವ ಒಂದು ಜಾತಿಯ ಮರಗಳು ದಕ್ಷಿಣ ದೇಶದಲ್ಲಿ ಬೆಳೆಯುತ್ತವೆ. ಅವುಗಳ ಹಣ್ಣುಗಳನ್ನು ತಿನ್ನುತ್ತಾರೆ. ಅವುಗಳ ಎಲೆಗಳು ಒಂದು ಗಜ ಉದ್ದವಾಗಿಯೂ ಮೂರು ಕೈಬೆರಳುಗಳಷ್ಟು ಅಗಲವಾಗಿಯೂ ಇವೆ. ಹೀಗೆಂದು ಆತ ಹೇಳಿದ್ದಾನೆ. ಜನ ಇವನ್ನು ತಾರೀ (ತಾಲ ಮತ್ತು ತಾರ) ಎಂದು ಕರೆಯುವರೆಂದೂ ಬರೆವಣಿಗೆಗೆ ಉಪಯೋಗಿಸುವರೆಂದೂ ಬರೆದಾದ ಮೇಲೆ ಎಲ್ಲ ಎಲೆಗಳನ್ನೂ ಅವುಗಳ ಮಧ್ಯದಲ್ಲಿ ಮಾಡಿದ ರಂಧ್ರದ ಮೂಲಕ ದಾರವನ್ನು ಹಾಕಿ ಒಟ್ಟಿಗೆ ಕಟ್ಟಿಡುವರೆಂದೂ ತಿಳಿಸಿದ್ದಾನೆ. ಸು.ಪ್ರ.ಶ. 1441ರಲ್ಲಿ ಬಂದಿದ್ದ ಅಬ್ದುರ್ ರಜಾಕ್ ಎಂಬ ಪ್ರವಾಸಿ ವಿಜಯನಗರದಲ್ಲಿ ಓಲೆಗ್ರಂಥಗಳ ಬಳಕೆ ಇದ್ದುದನ್ನು ತಿಳಿಸಿ ಈ ಓಲೆಗರಿಗಳಲ್ಲಿ ತಾಲ ಮತ್ತು ಶ್ರೀತಾಲವೆಂಬ ಎರಡು ಬಗೆ ಇರುವುದನ್ನು ಗುರುತಿಸಿದ್ದಾನೆ. ತಾಲ ಎಲೆಯ ಮೇಲೆ ಕಬ್ಬಿಣದ ಕಂಠದಿಂದ ಬರೆಯುತ್ತಿದ್ದರೆಂದೂ ಶ್ರೀತಾಲ ಎಲೆಯನ್ನು ಮೊದಲು ಕಪ್ಪುಮಾಡಿ, ಅದರ ಮೇಲೆ ಲೇಖನಿಯಂಥ ಮೃದುವಾದ ಚೂಪು ಕಲ್ಲಿನಿಂದ ಬರೆಯುತ್ತಿದ್ದರೆಂದೂ ಆತ ತಿಳಿಸಿದ್ದಾನೆ. ಈ ರೀತಿ ಬರೆಯುತ್ತಿದ್ದುದನ್ನು ತಾನು ಕನ್ನಡ ಜಿಲ್ಲೆಗಳಲ್ಲಿಯೂ ದಕ್ಷಿಣ ಭಾರತದಲ್ಲಿಯೂ ಕಂಡುದಾಗಿ ಎ. ಹ್ಯಾಮಿಲ್ಟನ್ ಎಂಬಾತ ತಿಳಿಸಿದ್ದಾನೆ. ರಾಜೇಂದ್ರಮಿತ್ರ ಅವರು ಬಂಗಾಲದಲ್ಲಿ ಚಂಡಿ ಗ್ರಂಥ ಓಲೆಯಲ್ಲಿರುವುದಾಗಿ ತಿಳಿಸಿದ್ದಾನೆ. 
ಈ ಓಲೆ ಅಥವಾ ತಾಳೆ ಗ್ರಂಥಗಳು ಭಾರತದ ವಿವಿಧ ಭಾಗಗಳಲ್ಲಿ ದೊರೆತರೂ ಒರಿಸ್ಸ, ಗುಜರಾತ್, ಮದ್ರಾಸ್, ಕೇರಳ ಮತ್ತು ಮೈಸೂರು ಪ್ರಾಂತ್ಯಗಳಲ್ಲಿ ಹೇರಳವಾಗಿ ದೊರೆಯುತ್ತವೆ. ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ಪ್ರಾಚ್ಯ ವಿದ್ಯಾ ಸಂಶೋಧನಾಲಯಗಳಲ್ಲಿ, ಮದ್ರಾಸು ಓರಿಯಂಟಲ್ ಮ್ಯಾನ್ಯೂಸ್ಕ್ರಿಪ್ಟ್‌್ಸ ಲೈಬ್ರರಿ ಮತ್ತು ಅಡಿಯಾರ್ ಲೈಬ್ರರಿಗಳಲ್ಲಿ, ತಿರುವಾಂಕೂರ್ ಸರಸ್ವತಿಮಹಲ್ ಲೈಬ್ರರಿಯಲ್ಲಿ ಬಹುಮಟ್ಟಿಗೆ ಹಸ್ತಪ್ರತಿಗಳೆಲ್ಲವೂ ಓಲೆಯಲ್ಲಿವೆ. ಅಂತೆಯೇ ಅನೇಕ ಮಠಗಳಲ್ಲಿ, ಮಂದಿರಗಳಲ್ಲಿ, ಮನೆಗಳಲ್ಲಿ ಇವನ್ನು ಕಾಣಬಹುದು. ಗುಪ್ತರ ಲಿಪಿಯಲ್ಲಿ ಬರೆದ ಹಳೆಯ ಓಲೆಗ್ರಂಥವನ್ನು (6ನೆಯ ಶತಮಾನ) ಜಪಾನಿನ ಹೊರಿಂಜಿ ಎಂಬ ಮಠದಲ್ಲಿ ಕಾಪಾಡಲಾಗಿದೆ. ತಕ್ಲಮಕನ್ ಮರುಭೂಮಿಯಲ್ಲಿ ಇನ್ನೂ ಹಳೆಯ ಕಾಲದ ಓಲೆಗ್ರಂಥಗಳಿರಬಹುದೆಂದೂ ನಿಖರವಾಗಿ ಹೇಳಲು ಯಾವ ಆಧಾರ ಸಾಹಿತ್ಯವೂ ಇಲ್ಲವೆಂದೂ ಆದರೆ ನೇಪಾಳದಲ್ಲಿ ಗುಪ್ತಲಿಪಿಯ ಹಸ್ತಪ್ರತಿಗಳನ್ನು (7ನೆಯ ಶತಮಾನ) ನೋಡಿದುದಾಗಿಯೂ ಗುಜರಾತಿನಲ್ಲಿರುವ ಪಾಟನ್ ಹಸ್ತಪ್ರತಿಗಳ ಭಂಡಾರ ಅತ್ಯಂತ ಪ್ರಾಚೀನವಾದ ಹಸ್ತಪ್ರತಿಗಳನ್ನು ಹೊಂದಿದ್ದು, 1101ರ (ವಿ.ಸಂ. 1157) ನಿಶಿತಚೂರ್ಣಿ ಎಂಬ ಹಸ್ತಪ್ರತಿ ಇರುವುದಾಗಿಯೂ ಬರೋಡ ಓರಿಯಂಟಲ್ ಇನ್ಸ್ಟಿಟ್ಯೂಟಿನ ನಿರ್ದೇಶಕರಾದ ಬಿ. ಭಟ್ಟಾಚಾರ್ಯ ತಿಳಿಸಿದ್ದಾರೆ. 

ಜಯಸಲ್ಮೀರ್ನಲ್ಲಿ ಜೈನತತ್ತ್ವಕ್ಕೆ ಸಂಬಂಧಪಟ್ಟ ಜ್ಞಾನಭಂಡಾರಗಳಿವೆ. ಪುರಾತನ ಓಲೆ ಹಸ್ತಪ್ರತಿಗಳ ಸಂಗ್ರಹ ಶಂಬುನಾಥ್ ಜೈನಮಂದಿರದ ಹತ್ತಿರವಿರುವ ಕೋಟೆಯಲ್ಲಿವೆ. ಇವುಗಳಲ್ಲಿ ಕುವಲಯಮಾಲಾ, ಮಹಾಪುರುಷ ಚರಿತ, ವಸುದೇವ ಹಿಂಡಿ ಮೊದಲಾದ ಮುಖ್ಯ ಗ್ರಂಥಗಳಿವೆ. ಪಂಚಮಿಕಹ ಎಂಬ ಗ್ರಂಥದ ಹಸ್ತಪ್ರತಿಯ ಕಾಲ (ವಿ.ಶ 1109) 1053 ಎಂದು ಜೋದಪುರದ ಜಿನಸಾಗರ ಸೂರಿ ಹೇಳುತ್ತಾರೆ.
ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹಸ್ತಪ್ರತಿಗಳ ಕೋಶಾಗಾರದಲ್ಲಿ ಕಾಲ ಉಲ್ಲೇಖವಾಗಿರುವ ಪುರಾತನ ಗ್ರಂಥವೆಂದರೆ ಸು. 1235ರಲ್ಲಿದ್ದ ಗುಣವರ್ಮನ ಪುಷ್ಪದಂತ ಪುರಾಣವೆಂಬ ಚಂಪುಗ್ರಂಥ. ಈ ಪ್ರತಿಯ ಕಾಲ 1436. ಇದಕ್ಕಿಂತಲೂ ಹಿಂದಿನದಾದ ಓಲೆಗ್ರಂಥವೆಂದರೆ ಶ್ರವಣಬೆಳಗೊಳದ ಜೈನಮಠದಲ್ಲಿರುವ ಪಂಪನ ಆದಿಪುರಾಣ. ಪ್ರತಿಯ ಕಾಲ 1379. ಕಾಲ ನಮೂದಾಗಿರುವ ಮತ್ತೊಂದು ಮುಖ್ಯ ಪ್ರತಿಯೆಂದರೆ 1554ರಲ್ಲಿ ನಕಲಾಗಿರುವ ಗದುಗಿನ ನಾರಣಪ್ಪನ ಮಹಾಭಾರತದ ಪ್ರತಿ. ಇದರ ಪ್ರತಿ ಪತ್ರದ ಎರಡು ರಂಧ್ರ್ರಗಳಿಗೂ ಬೆಳ್ಳಿಯ ಉಂಗುರಗಳನ್ನು ಅಳವಡಿಸಲಾಗಿದೆ. ಕಟ್ಟಲು ಪೋಣಿಸುವ ದಾರವನ್ನು ಅತ್ತಿತ್ತ ಎಳೆಯುವಾಗ ಹರಿಯದಿರಲೆಂಬ ಶ್ರದ್ಧೆಯಿಂದ ಈ ಬೆಳ್ಳಿಯ ಉಂಗುರಗಳನ್ನು ಅಳವಡಿಸಿರುವುದು ಅತ್ಯಂತ ಮೆಚ್ಚುಗೆಯ ವಿಷಯವಾಗಿದೆ.

ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿರುವ ದೇವೀಸ್ತೋತ್ರ ಮತ್ತು ರಾಮಾಯಣದ ಭಾಗವಾದ ಸುಂದರಕಾಂಡ ಓಲೆಗ್ರಂಥಗಳು ಸೂಕ್ಷ್ಮಲಿಪಿಗೆ ಪ್ರಸಿದ್ಧವಾಗಿವೆ. ದೇವೀಸ್ತೋತ್ರದಲ್ಲಿ ಒಟ್ಟು 90 ಪತ್ರಗಳಿದ್ದು ಪ್ರತಿ ಪತ್ರವೂ 3 1/4 ´ 1 1/2 ಅಂಗುಲ ಅಳತೆಯುಳ್ಳದ್ದಾಗಿದೆ. ಬರೆವಣಿಗೆಯ ಅಳತೆ 2 1/2 ´ 1 1/3 ಅಂಗುಲ. ಈ ಉದ್ದದಲ್ಲಿ 25 ಅಕ್ಷರಗಳನ್ನು ಕೊರೆದಿದ್ದಾರೆ. ಅಗಲದಲ್ಲಿ 18-23 ಪಂಕ್ತಿಗಳಿವೆ. ಇದು ತೆಲಗು ಲಿಪಿಯಲ್ಲಿದೆ. ಸುಂದರಕಾಂಡ ಗ್ರಂಥಾಕ್ಷರದಲ್ಲಿದೆ. ಇದರ ಪ್ರತಿಪತ್ರವೂ 4 1/2 ´ 1 3/4 ಅಂಗುಲ; ಅಳತೆಯುಳ್ಳದ್ದಾದರೂ ಬರೆಗಣಿಗೆಯ ಭಾಗದ ಅಳತೆ 3 3/4 ´ 1 1/2 ಅಂಗುಲ. ಈ ಉದ್ದದಲ್ಲಿ 47 ಅಕ್ಷರಗಳಿದ್ದು, ಅಗಲದಲ್ಲಿ 21 - 25 ಸಾಲುಗಳಿವೆ. ಇವುಗಳ ಜೊತೆಗೆ ಇದೇ ಮಾದರಿಯಲ್ಲಿ ಬರೆದಿರುವ, ಹೆಸರು ತಿಳಿಯದ ಯಾವುದೋ ಗ್ರಂಥದ ಒಂದು ಪತ್ರದ ಅಳತೆ                18 ´ 11/4 ಅಂಗುಲ; 1 1/4 ಅಂಗುಲ ಅಗಲದಲ್ಲಿ 22 ಪಂಕ್ತಿಗಳಿದ್ದು 18 ಅಂಗುಲ ಅಗಲದಲ್ಲಿ 420 ಅಕ್ಷರಗಳಿವೆ ಎಂದಾಗ ಬೆರಗು ಹುಟ್ಟಿ ಕುತೂಹಲ ಕೆರಳುವುದು ಸಹಜವಾಗಿದೆ. 
ತಾಲ ಮತ್ತು ಶ್ರೀತಾಲಗಳಲ್ಲಿ ತಾಳೆಗರಿಗಳನ್ನೇ ಹೆಚ್ಚಾಗಿ ಉಪಯೋಗಿಸಿರುವುದು ಕಂಡುಬರುತ್ತದೆ. ಏಕೆಂದರೆ ಇದು ಸ್ಪಲ್ಪ ಮಂದವಾಗಿ ಅಗಲವಾದ ಕಬ್ಬಿಣದ ಸಲಾಕೆಯಂಥ ಕಂಠದಿಂದ ಕೊರೆಯಲು ಅನುಕೂಲವಾಗಿತ್ತು. ಒಂದು ಸಾರಿ ಕೊರೆದ ಅಕ್ಷರಗಳು ಮತ್ತು ಅಳಿಸಿಹೋಗುತ್ತವೆಂಬ ಹೆದರಿಕೆ ಇರಲಿಲ್ಲ. ಕೊರೆದ ಅಕ್ಷರಗಳ ಮೇಲೆ ಕಪ್ಪುಬಣ್ಣದ ಪುಡಿಯನ್ನು ಹಚ್ಚಿದರೆ ಕೊರೆದ ಭಾಗದಲ್ಲಿ ಆ ಬಣ್ಣ ಸೇರಿ ಅಕ್ಷರಗಳು ಸ್ಪಷ್ಟವಾಗಿ ಕಾಣುತ್ತಿದ್ದುವು. ಈ ಕಪ್ಪು ಬಣ್ಣ ಮಾಸಿ ಹೋದಾಗ ಮತ್ತೆ ಆ ಬಣ್ಣವನ್ನೇ ಉಪಯೋಗಿಸಿ ಚೆನ್ನಾಗಿ ಕಾಣುವಂತೆ ಮಾಡಬಹುದಾಗಿತ್ತು. 

ಶ್ರೀತಾಲ ಎಲೆ ಬಹಳ ತೆಳುವಾಗಿರುವುದರಿಂದ ಕೊರೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇದು ನಯವಾಗಿ ಮೃದುವಾಗಿದ್ದು ಮಸಿಯನ್ನು ಸುಲಭವಾಗಿ ಹೀರಬಲ್ಲುದಾಗಿದ್ದಿತು. ಬರೆದಾಗ ಚೆನ್ನಾಗಿ ಕಂಡರೂ ಯಾವುದೇ ಕಾರಣದಿಂದ ಅಳಿಸಿಹೋದಾಗ ಅದನ್ನು ಮತ್ತೆ ತುಂಬುವುದು ಸಮಸ್ಯೆಯಾಗಿ ಪರಿಣಮಿಸುತ್ತಿತ್ತು. ಅಂತಹದೇ ಮತ್ತೊಂದು ಪ್ರತಿ ದೊರೆಯದೆ ಅದನ್ನು ತುಂಬುವಂತಿರಲಿಲ್ಲ. ಆದ್ದರಿಂದಲೇ ಶ್ರೀತಾಲಕ್ಕಿಂತ ಹೆಚ್ಚಾಗಿ ತಾಳೆಗರಿಯನ್ನೇ ಎಲ್ಲಡೆಯೂ ಬಳಸಿದ್ದಾರೆ.

ತಾಳೆ ಎಲೆಗಳನ್ನು ಒಣಗಿಸಿ ಬೇಯಿಸಿ ಅಥವಾ ನೀರಿನಲ್ಲಿ ನೆನೆಸಿ ಮತ್ತೆ ಒಣಗಿಸಿ ಬೇಕಾದ ಅಳತೆಗೆ ಕತ್ತರಿಸಿ ಬರೆಯಲು ಉಪಯೋಗಿಸುತ್ತಿದ್ದರು ಎಂಬುದಾಗಿ ರಾಜೇಂದ್ರಲಾಲ್ ಮಿತ್ರ ಅವರು ತಿಳಿಸುತ್ತಾರೆ. ಗಿಡದಿಂದ ಎಲೆಯ ಮೋತೆ ಹೊರಹೊರಟು ಇನ್ನೇನು ಬಿಚ್ಚಿ ಹರಡುತ್ತದೆ ಎನ್ನುವಷ್ಟರಲ್ಲಿ ಹಾಳೆಯನ್ನು ಕತ್ತರಿಸಿ ತಂದು, ಕೊನೆಯಪಕ್ಷ ಏಳು ದಿನಗಳವರೆಗಾದರೂ ಬಿಸಿಲಿನಲ್ಲಿ ಒಣಗಿಸುತ್ತಿದ್ದರು. ಅನಂತರ ಮೂರು ತಿಂಗಳವರೆಗಾದರೂ ನೆಲದಲ್ಲಿ ಹೂಳಿ, ತೆಗೆದು ಶುದ್ಧಗೊಳಿಸಿ, ಬೇಕಾದ ಅಳತೆಗೆ ಎಲೆಗಳನ್ನು ಕತ್ತರಿಸಿ ಅಡಿಗೆಮನೆಯ ಅಟ್ಟಗಳಲ್ಲಿಡುತ್ತಿದ್ದರು. ಅಡಿಗೆಮನೆಯ ಹೊಗೆಯಿಂದ ಅವು ಹದಗೊಳ್ಳುತ್ತಿದ್ದುವು. ಹೀಗೆ ಹದಗೊಂಡವನ್ನು ತಮಗೆ ಬೇಕಾದಾಗ ತೆಗೆದು ಉಪಯೋಗಿಸುತ್ತಿದ್ದರು-ಎಂಬುದಾಗಿ ಬಿ. ಭಟ್ಟಾಚಾರ್ಯರು ತಿಳಿಸುತ್ತಾರೆ.

ತಾಳೆಯ ಗರಿಗಳನ್ನು ಹಸಿಯದಾಗಿರುವಾಗ ಕುದಿನೀರಿನಲ್ಲಿ ಬೇಯಿಸಿ ಒಣಗಿಸಿ ನುಣುಪಾದ ಗಾರೆಯ ಕಲ್ಲಿನಿಂದ ಉಜ್ಜಿ ಮೃದುವಾಗಿ ಮಾಡುತ್ತಾರೆ. ಆಗ ಅದರ ಎರಡು ಪಕ್ಕಗಳೂ ಸಮತಲವಾಗುತ್ತವೆ. ಬರೆಹಕ್ಕೆ ಯೋಗ್ಯವಾಗುತ್ತವೆ-ಎಂದು ಡಿ.ಎಲ್. ನರಸಿಂಹಾಚಾರ್ ತಿಳಿಸಿದ್ದಾರೆ.

ಹೀಗೆ ಓಲೆಗರಿಗಳನ್ನು ವಿವಿಧ ರೀತಿಯಲ್ಲಿ ಹದಗೊಳಿಸಿ ಬರೆವಣಿಗೆಗೆ ಉಪಯೋಗಿಸುವಾಗ ವಿಷಯದ ಜೊತೆಗೆ ವಿಷಯನಿರೂಪಣೆಗೆ ಸಹಾಯಕವಾಗಿ ಕೆಲವು ಪ್ರತಿಗಳಲ್ಲಿ ಅಲ್ಲಲ್ಲಿಯೇ ಚಿತ್ರಗಳನ್ನೂ ಕೊರೆದಿದ್ದಾರೆ. ಇಂಥ ಚಿತ್ರಗಳನ್ನು ಮೂಡಬಿದರೆ ಮಠದಲ್ಲಿರುವ ಅರ್ಧಮಾಗಧಿ ಭಾಷೆಯ ಕನ್ನಡ ಶಾಸನ ಲಿಪಿಯ ಜೈನ ಧವಳಗ್ರಂಥದಲ್ಲಿಯೂ ನೇಮಿಚಂದ್ರನ ನೇಮಿನಾಥಪುರಾಣ ಹಸ್ತಪ್ರತಿಯಲ್ಲಿಯೂ ಕಾಣಬಹುದಾಗಿದೆ
ಈ ಓಲೆಗ್ರಂಥಗಳಲ್ಲಿ ವಿವಿಧ ರೀತಿಯ ಬರೆವಣಿಗೆಯನ್ನೂ ಒಂದೇ ಕೃತಿಯ ಹಲವಾರು ಪ್ರತಿಗಳನ್ನೂ ನಾವು ಕಾಣುತ್ತಿರುವುದು ಮೂಲಗ್ರಂಥಗಳನ್ನು ನಕಲುಮಾಡಿ ಜನರು ಉಪಯೋಗಿಸುತ್ತಿದ್ದುದರಿಂದ. ನಮಗೆ ಕೃತಿಕಾರನೇ ಬರೆದ ಪ್ರತಿಗಳು ದೊರೆಯುವುದು ದುರ್ಲಭ. ದೊರೆಯುವ ಪ್ರತಿಗಳೆಲ್ಲವೂ ನಕಲುಗಳೇ. ಇಂಥ ನಕಲುಗಳನ್ನು ಮಾಡುವಾಗ್ಗೆ ವಿವಿಧ ಪ್ರತಿಕಾರರು ವಿವಿಧ ರೀತಿಯ ಬರೆವಣಿಗೆಯನ್ನೂ ಮಾಡಿದ್ದಾರೆ. ಆಯಾ ಭಾಷಾಗ್ರಂಥಗಳಲ್ಲಿ ಆಯಾ ಭಾಷಾಲಿಪಿಯನ್ನೇ ಸಾಮಾನ್ಯವಾಗಿ ಉಪಯೋಗಿಸಿದರೂ ಓದುಗರ ಇಚ್ಛೆಗೆ ಅನುಸಾರವಾಗಿ ಆಯಾ ಪ್ರಾಂತದ ವಿಭಾಗದ ಜನರ ರೂಢಿಗೆ ತಕ್ಕಂತೆ ಕನ್ನಡ, ತಮಿಳು, ತೆಲುಗು, ತುಳು, ತಿಗಳಾರಿ, ನಾಗರಿ, ಗ್ರಂಥ-ಮೊದಲಾದ ಹಲವಾರು ಲಿಪಿಗಳನ್ನು ಬೇರೆ ಬೇರೆ ಭಾಷಾಗ್ರಂಥಗಳಲ್ಲಿ ಬಳಸಿದ್ದಾರೆ. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ ಭಾಷಾಭೂಷಣ ಹಸ್ತಪ್ರತಿ ಈ ಮಾದರಿಗೆ ಅತ್ಯಂತ ಉತ್ತಮ ನಿದರ್ಶನವಾಗಿದೆ. ಇದರಲ್ಲಿ ನೋಡುವುದು ಮಲಯಾಳಿ ಲಿಪಿಯನ್ನು, ಓದುವುದು ಸಂಸ್ಕೃತ ಭಾಷೆಯನ್ನು ತಿಳಿಯುವುದು ಕನ್ನಡ ವ್ಯಾಕರಣವನ್ನು.

ನಕಲುಮಾಡುವ ವ್ಯಕ್ತಿಗಳು ಬಹುಪ್ರಯಾಸದಿಂದ ಈ ಕೆಲಸ ನಿರ್ವಹಿಸುತ್ತಿದ್ದರು. ಕೆಲವರು ಅದನ್ನೇ ಒಂದು ವೃತ್ತಿಯನ್ನಾಗಿ ಮಾಡಿಕೊಂಡಿದ್ದರು. ನಕಲುಗಳನ್ನೆತ್ತಿದ ಪ್ರತಿಕಾರರು ಪ್ರತಿಗಳ ಕೊನೆಯಲ್ಲಿ ತಂತಮ್ಮ ವಿಳಾಸಗಳನ್ನು ಕೊಡುವುದರ ಜೊತೆಗೆ ಕೆಲವರು ತಿಥಿ ವಾರ ನಕ್ಷತ್ರಗಳನ್ನೂ ಕೊಟ್ಟಿದ್ದಾರೆ. ತಪ್ಪಿದ್ದರೆ ತಿದ್ದಿಕೊಳ್ಳಿರೆಂದು ಪ್ರಾರ್ಥಿಸಿದ್ದಾರೆ.

ರಾಸಾಯನಿಕ ಕ್ರಿಯೆಯಿಂದ ತಯಾರಾದ ಕಾಗದಕ್ಕಿಂತಲೂ ಪ್ರಕೃತಿಸಹಜವಾಗಿ ಬಂದ ಓಲೆಗರಿ ಹೆಚ್ಚು ಬಾಳಿಕೆ ಬರುವಂಥದೂ ಬಹುಬೇಗ ಹುಳುಗಳ ಹೊಡೆತಕ್ಕೆ ಬಲಿಯಾಗದುದೂ ಆದರೂ ಶೀತೋಷ್ಣಗಳಿಂದಲೂ ಹುಳುಗಳ ಕಾಟದಿಂದಲೂ ಹೊರತಾದುದಲ್ಲ. ಆದುದರಿಂದ ಈ ಅಮೂಲ್ಯ ಜ್ಞಾನಸಂಪತ್ತನ್ನು ರಕ್ಷಿಸುವಲ್ಲಿ ಹಲವರು ಹಲವು ಮಾರ್ಗಗಳನ್ನು ಅನುಸರಿಸಿದ್ದಾರೆ. ಕೆಲವರು ಅವನ್ನು ಬಣ್ಣದ ಬಟ್ಟೆಗಳಲ್ಲಿ ಸುತ್ತಿಟ್ಟು ದೂಳು ಮತ್ತು ಹುಳುಗಳಿಂದ ರಕ್ಷಿಸಿದ್ದಾರೆ. ಈ ಬಟ್ಟೆಯಲ್ಲಿ ಕೆಂಪು ಮತ್ತು ಹಳದಿ ಬಣ್ಣದವೂ ರೇಷ್ಮೆ ಬಟ್ಟೆಯೂ ಹುಳುಗಳನ್ನು ದೂರವಿಡಬಲ್ಲ ಶಕ್ತಿಯನ್ನು ಪಡೆದಿವೆಯೆಂದು ತಿಳಿದುಬರುತ್ತದೆ. ಕೆಲವರು ಓಲೆಕಟ್ಟಿನ ಆಕಾರಕ್ಕೆ ತಕ್ಕ ಮರದ ಪೆಟ್ಟಿಗೆಗಳಲ್ಲಿಟ್ಟು ಕಾಪಾಡಿದ್ದಾರೆ. ಮತ್ತೆ ಕೆಲವೆಡೆಯಲ್ಲಿ ಘೋಡಾವಚ, ಅದಕ್ಕಾಗಿಯೇ ಸಿದ್ಧಪಡಿಸಿದ ಎಣ್ಣೆ-ಮೊದಲಾದುವುಗಳನ್ನೂ ಉಪಯೋಗಿಸುತ್ತಿದ್ದರು. ಇವುಗಳ ಸಂಗ್ರಹ, ಸಂರಕ್ಷಣೆ ಮತ್ತು ಪ್ರಕಟಣೆಗಾಗಿ ಹಲವಾರು ಸಂಸ್ಥೆಗಳು ಸ್ಥಾಪಿತವಾಗಿ ಕೆಲಸಮಾಡುತ್ತಿವೆ (ನೋಡಿ- ಪಪೈರಸ್).		(ಎಸ್.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ